ಮುದ್ದು ಚೆಲುವೆ Poem by Praveen Kumar in Bhavana

ಮುದ್ದು ಚೆಲುವೆ

ಎಲ್ಲಿ ನೀನು ಮುದ್ದು ಚೆಲುವೆ,
ನನ್ನೊಳಗಿನ ಪ್ರಾಣದೊಲವೆ,
ಒಮ್ಮೆ ಬಂದು, ಮುದ್ದು ಕೊಟ್ಟು
ನನ್ನೊಳಗೆ ಹಿಡಿದು ಬಿಟ್ಟು
ನಿನ್ನೊಳಗೆ ಹರಿಯ ಬಿಟ್ಟು
ನಮ್ಮಂತರ ಹರಿಯದಂತೆ
ಮತ್ತೆ ದೂರವಾಗದಂತೆ
ಭದ್ರ ಬೀಗ ಬಿಗಿಯಲೇನು?
ಕೀಲಿಕೈ ದೂರ ಒಗೆಯಲೇನು?

ನೀನು ಅಲ್ಲಿ, ನಾನು ಇಲ್ಲಿ,
ಇದಾವ ಸೀಮೆ ನ್ಯಾಯವು?
ನಿನ್ನನ್ನೆಲ್ಲೊ ಇಟ್ಟುಬಿಟ್ಟು,
ನನ್ನನ್ನಿಲ್ಲಿ ಹಿಡಿದುಬಿಟ್ಟು,
ಎಣ್ಣೆ ಬತ್ತಿ ದೂರವಿಟ್ಟು
ವಿಧಿಯದೇನು ವಿನೋದವೊ?
ರೆಕ್ಕೆ ಹರಿದ ಹಕ್ಕಿಯಂತೆ,
ಕಾಲು ಮುರಿದ ಬೆಕ್ಕಿನಂತೆ
ನಾನಿಲ್ಲೆ ಈಗ ಹಳಹಳಿಸುವೆ,
ನಿನ್ನ ನೆನೆದು ಚಡಪಡಿಸುವೆ;
ನಿನಗೆ ಕರುಣೆ ಬಾರದೇಕೆ?
ನನ್ನ ಹತಾಶೆ ತಿಳಿಯದೇಕೆ?
ಗುಡುಗಿನೊಡನೆಯ ಮಿಂಚಿನಂತೆ,
ಕಡಲಿನೊಡಲಿನ ತೆರೆಗಳಂತೆ
ನೀನೇಕೆ ಹಾರಿ ಬಳಿಗೆ ಬಂದು,
ನೀನು ನಾನು ಒಂದೆಯೆಂದು -
ನಾನು ನಿನ್ನ ಕೈಯ ಒಳಗೆ,
ನೀನು ನನ್ನ ಕೈಯ ಒಳಗೆ
ಇದ್ದುಬಿಟ್ಟು, ಮುದ್ದು ಕೊಟ್ಟು -
ಬಾಯಿತುಂಬ ಹೇಳಿಬಿಟ್ಟು,
ಪ್ರೀತಿ ದೀಪ ಹಚ್ಚಿಬಿಟ್ಟು
ಹೊಸತು ಲೋಕ ತೋರಲಾರೆ?
ನನ್ನ ಜೀವ ಉಳಿಸಲಾರೆ?

ನನ್ನ ಇರವು ನಿನಗೆ ಗೊತ್ತು,
ಮತ್ತೇಕೆ ನಿನಗೆ ಇಷ್ಟು ಹೊತ್ತು?
ನನಗೆ ನಿನ್ನ ವಾರ್ತೆ ಇಲ್ಲ,
ಇನ್ನೀ ನಿನ್ನ ವಿಳಂಬ ಸಲ್ಲ;
ಇದ್ದು ಬಿದ್ದ ರೆಕ್ಕೆ ತೊಟ್ಟು
ವಾಯುಮಾರ್ಗ ಹಿಡಿದುಬಿಟ್ಟು
ಹಾರಿ ಬಾರೆ ನನ್ನ ಬಳಿಗೆ,
ನಿನ್ನ ನಾನು ಕಾಯುತ್ತಿರುವೆ;
ಮಳೆಬಿಲ್ಲಿನ ಹಾದಿ ಹಿಡಿದು,
ಮೋಡಗಳ ಗೋಡೆ ಕಡಿದು
ದಿಗಂತದಿಂದ ತೂರಿ ಬಾ,
ನಿನ್ನ ಚೆಲುವು ನನಗೆ ತಾ;
ಇನ್ನು ನಾನು ಕಾಯಲಾರೆ,
ನಿಷ್ಠ ನಿಯಮ ತೋರಲಾರೆ;
ನೀನು ಬೇಗ ಬರದೆ ಹೋದರೆ,
ನಿನ್ನ ನನಗೆ ತರದೆ ಹೋದರೆ
ನಾನೇ ನಿನ್ನ ದಾರಿ ಹಿಡಿದು,
ಎಲ್ಲೆಂದರಲ್ಲಿ ಸೀದ ನಡೆದು
ನಿನ್ನ ಕೂಡ ಸೇರುವೆನು,
ನಮ್ಮ ವಿಧಿಯ ಬಿಗಿಯುವೆನು.

ಅದೆಷ್ಟು ಕಾಲ ಕಳೆದು ಬಿಡಲಿ,
ಸೂರ್ಯಚಂದ್ರರು ಬಳಲಿ ಬಿಡಲಿ,
ನಿನ್ನ ತಲಾಶೆ ಮುಗಿವವರೆಗೆ,
ನಾವು ಕೂಡಿ ಮೆರೆವವರೆಗೆ
ನನ್ನ ಈ ಶ್ರಮ ಮುಗಿವುದಿಲ್ಲ,
ದಿಗಂತ ಕ್ರಮಣ ನಿಲುವುದಿಲ್ಲ;
ನನಗೆ ಗೊತ್ತು ನಿನ್ನ ನಿಲುವು,
ಮೇರೆ ಮೀರಿದ ನಿನ್ನ ಒಲವು;
ನೀನೆ ಹಾರಿ ಬಳಿಗೆ ಬಂದರೆ
ನನಗೆ ಬರುವ ಎಲ್ಲ ತೊಂದರೆ
ನಿನ್ನನ್ನ ಧೃತಿ ಗೆಡಿಸಿ ನಿಲಿಸಿ
ನಿನ್ನ ಕ್ರಮಣಕೆ ತಡೆಯೊಡ್ಡಿದೆ.

ಕಾಲಯೆಂದೂ ಹೀಗೇ ಇಲ್ಲ,
ಇದರ ಸತ್ಯ ವಿಧಿಯೆ ಬಲ್ಲ;
ಕಾಲಚಕ್ರ ತಿರುಗುತ್ತಿದೆ,
ಹೊಸತು ಕಾಲ ಬರುವುದಿದೆ;
ನಮ್ಮ ನಮ್ಮ ನಿರಾಶೆ ಬಿಟ್ಟು
ಹೊಸತು ಬಟ್ಟೆ ನಾವು ತೊಟ್ಟು,
ದಿಗಂತದಲ್ಲಿ ದೃಷ್ಟಿಯಿಟ್ಟು
ನಮ್ಮ ಕಾಲ ಕಾಯಬೇಕು;
ಆದುವು ಬೇಗ ಬರುವುದಿದೆ,
ನಮ್ಮ ಕೂಡಿ ಹಾಕಲಿದೆ;
ನಮ್ಮ ಕಾಲ ಬರುವವರೆಗೆ,
ನಮ್ಮ ಆಶೆ ತೀರುವವರೆಗೆ
ಸಂಯಮದಿಂದ ಇರಲೆ ಬೇಕು,
ದಿನ ಕ್ಷಣಕ್ಷಣ ಗಣಿಸಬೇಕು.

READ THIS POEM IN OTHER LANGUAGES
Close
Error Success