ರೆ, Poem by Venkatesh Davangere

ರೆ,

ನಿನಗೆ ಸಂಬಂಧಿಸಿದ್ದೆಲ್ಲವೂ ತಮ್ಮಷ್ಟಕ್ಕೆ ತಾವು ಕಳೆದುಕೊಳ್ಳುತ್ತಾ
ನಿನ್ನನ್ನೇ ಬಲಿ ಕೊಡುತಿದ್ದರೂ ನೀನು ತಲೆ ಎತ್ತಿ ನಿಂತಿದ್ದರೆ;
ಎಲ್ಲರಿಗು ನಿನ್ನ ಅನುಮಾನಿಸಲು ಅನುವು ಮಾಡಿಕೊಟ್ಟು,
ಎಲ್ಲರು ಅನುಮಾನಿಸುತ್ತಿರುವಾಗ ನಿನ್ನ ನೀನು ಗಟ್ಟಿಯಾಗಿ ನಂಬುತ್ತಿದ್ದರೆ:
ಕಾಯಲು ಸಿದ್ಧವಾಗಿಯೂ ಕಾಯುವುದರಿಂದ ನೀನು ಬೇಸರಗೊಳ್ಳದಿದ್ದರೆ,
ಅಥವಾ, ಸುಳ್ಳನ್ನು ಹೇಳಿಸಿಕೊಂಡೂ ಸುಳ್ಳನ್ನಾಡದಿದ್ದರೆ,
ಅಥವಾ, ದ್ವೇಷಿಸಲ್ಪಟ್ಟೂ ಯಾರನ್ನು ದ್ವೇಷಿಸದಿದ್ದರೆ,
ಆದಾಗ್ಯೂ, ತುಂಬಾ ಒಳ್ಳೆವನಾಗಿ ಕಾಣದಿದ್ದರೆ
ತುಂಬಾ ಬುದ್ದಿವಂತಿಕೆಯಿಂದ ಮಾತನಾಡದಿದ್ದರೆ;

ಕನಸುಗಳನ್ನ ಕಂಡೂ- ಕನಸುಗಳಿಗೆ ದಾಸ್ಯನಾಗದಿದ್ದರೆ,
ಯೋಚಿಸಿಯೂ- ಯೋಚನೆಗಳೇ ನಿನ್ನ ಗುರಿಯಾಗಲು ಬಿಡದಿದ್ದರೆ,
ಸುಕಾಂತ್ಯ-ದುಃಖಾಂತ್ಯಗಳೆರಡನ್ನು ಕಂಡೂ ಸಹ
ಆ ಇಬ್ಬರು ಮೋಸಗಾರರನ್ನ ನೀನು ಸಮಾನವಾಗಿ ಕಾಣುವುದಿದ್ದರೆ:
ನೀನೆ ನುಡಿದ ಸತ್ಯವನ್ನು, ವಂಚಕರು ತಿರುಚಿ ಜನರನ್ನು
ಮುಠ್ಠಾಳರನ್ನಾಗಿಸುತ್ತಿದ್ದರೂ- ನೀನು ಸಹಿಸುತಿದ್ದರೆ,
ಅಥವಾ, ನಿನ್ನನ್ನು ಮುರಿದ, ಬೆಂಡಾಗಿಸಿದ, ನೀನೇ ಅನುವು ಮಾಡಿಕೊಟ್ಟ
ಬದುಕನ್ನು ಮತ್ತೆ ಅಳಿದುಳಿದುದರಿಂದ ನೀನು ಕಟ್ಟುವುದಿದ್ದರೆ;

ನಿನ್ನೆಲ್ಲಾ ಗೆಲುವುಗಳನ್ನ ರಾಶಿ ಮಾಡಿ ಅವಗಳನ್ನು ನಾಣ್ಯವನ್ನು
ಚಿಮ್ಮಿ ನಿರ್ಧರಿಸುವ ಜೂಜಿಗೆ ಇಟ್ಟು-ಸೋತು, ಮತ್ತೆ ಮೊದಲಿನಿಂದ ಪ್ರಾರಂಭಿಸಿ
ಸೋತ ಬಗ್ಗೆ ಒಂದಿನಿತೂ ಶಪಿಸದೆ, ಅಳಿಯದೆ ಮುನ್ನುಗ್ಗುವುದಿದ್ದರೆ;
ನಿನ್ನ ಪಾಳಿ ಮುಗಿದ ಮೇಲೆಯೂ ನರ, ನಾಡಿ, ಕಸುವನೊಟ್ಟುಗೂಡಿಸಿ
ನಿನ್ನ ಪಾಳಿಯನ್ನು ನಿರ್ವಹಿಸಲು ನೀನು ಸಿದ್ಧನಿದ್ದರೆ,
ಮತ್ತು, ಇಚ್ಚಾಶಕ್ತಿಯೊಂದನ್ನು ಬಿಟ್ಟು ಉಳಿದೆಲ್ಲವೂ ಅಳಿದುಹೋದಾಗ
ಅದೊಂದೇ: "ನಿಮಿರಿ ನಿಲ್ಲು".! ಎಂದು ಹೇಳುತ್ತಿದ್ದರೆ;

ಸಾಮಾನ್ಯ ಜನರೊಡನೆ ಬೆರತು ನಿನ್ನ ಸದ್ಗುಣವನ್ನು ಉಳಿಸಿಕೊಂಡಿದ್ದರೆ,
ಅಥವಾ, ರಾಜರೊಡನೆ ನಡೆದೂ- ನಿನ್ನ ಸಾಮಾನ್ಯತೆಯನ್ನ ದೂರವಿಡದಿದ್ದರೆ,
ನಿನ್ನ ಮಿತ್ರರು-ಶತ್ರುಗಳಾರು ನಿನ್ನಲ್ಲಿ ನೋವುಂಟು ಮಾಡದಿದ್ದರೆ,
ತೀರಾ ಅಲ್ಲದಿದ್ದರೂ; ಸ್ವಲ್ಪವೇ ಜನ ನಿನ್ನಲ್ಲಿ ನಂಬಿಕೆ ಇಟ್ಟಿದ್ದರೆ,
ಕ್ಷಮಿಸಲಾರದ ಅರವತ್ತು ಕ್ಷಣಗಳ ಬೆಲೆಯುಳ್ಳ ಒಂದು ನಿಮಿಷದ
ದೂರವನ್ನ ನೀನು ಪೂರ್ತಿಯಾಗಿ ಆವರಿಸುವುದಿದ್ದರೆ,
ಮತ್ತೇನು ಬೇಕು ನಿನಗೆ..? ಈ ಭೂಮಿ ಮತ್ತದರೊಳಗಿರಿವುದೆಲ್ಲವೂ
ನಿನದೆ..! ನೀನೇ ನಿಜವಾದ ಮನುಜ..!

This is a translation of the poem If by Rudyard Kipling
Monday, December 2, 2019
Topic(s) of this poem: life
COMMENTS OF THE POEM
Close
Error Success